ಬೆಪ್ಪಾಲೆ  - ಅಪೋಸೈನೇಸೀ ಕುಟುಂಬಕ್ಕೆ ಸೇರಿದ ಪರ್ಣಪಾತಿ ಮರ (ಪಾಲ ಇಂಡಿಗೊ-ಪ್ಲಾಂಟ್).  ಕೊಡಮುರ್ಕ, ಕೊಡ್ಸೀಗೆ ಪರ್ಯಾಯ ನಾಮಗಳು.  ರೈಟಿಯ ಟಿಂಕ್ಟೋರಿಯ ಇದರ ಸಸ್ಯ ವೈಜ್ಜಾನಿಕ ಹೆಸರು.  ಆಫ್ರಿಕ, ಏಷ್ಯ, ಆಸ್ಟ್ರೇಲಿಯಗಳಲ್ಲೆಲ್ಲ ಇದರ ವ್ಯಾಪ್ತಿ ಉಂಟು.  ಭಾರತದಲ್ಲಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ದಕ್ಷಿಣ ಭಾರತದ ಹೆಚ್ಚು ಕಡಿಮೆ ಎಲ್ಲ ರಾಜ್ಯಗಳ ಮೈದಾನ ಸೀಮೆಯಲ್ಲಿ ಇದನ್ನು ಕಾಣಬಹುದು.  (ಆರ್.ಜಿ.ಬಿ.ಆರ್.ಎಂ.)

	ಇದು ಸುಮಾರು 1.8 ಮೀ ಎತ್ತರಕ್ಕೆ ಬೆಳೆಯುವ ಸಣ್ಣ ಗಾತ್ರದ ಮರ. ಅಪೂರ್ವವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವುದೂ ಉಂಟು.  ಇದರ ಕಾಂಡದ ಮೇಲೆ ಬೂದು ಬಣ್ಣದ ನಯವಾದ ತೊಗಟೆಯಿದೆ.  ಎಲೆಗಳು ಸರಳ.  ಇವುಗಳ ಜೋಡಣೆ ಅಭಿಮುಖ ಮಾದರಿಯದು,  ಆಕಾರ ಉದ್ದನೆಯ ಅಂಡದಂತೆ.  ರೆಂಬೆಗಳ ತುದಿಗಳಲ್ಲಿ ಹೂಗಳು ಮಧ್ಯಾರಂಬಿ ಗೊಂಚಲುಗಳಾಗಿ ಅರಳುವುವು.  

	ಇದನ್ನು ಬೀಜ ಇಲ್ಲವೆ ಕಾಂಡತುಂಡುಗಳ ಮೂಲಕ ವೃದ್ಧಿಸಬಹುದು.  ಗೋಡು, ಮರಳು, ಹಾಗೂ ಕೊಳೆಯುವ ಸಾವಯವ ವಸ್ತುಗಳ ಮಿಶ್ರಣ ಇದೆ ಬೆಳೆವಣಿಗೆಗೆ ಉತ್ತಮ.  

	ಬೆಪ್ಪಾಲೆಯ ಚೌಬೀನೆ ಬಾಚಣಿಗೆ, ಬಟ್ಟಲು, ತಟ್ಟೆ, ಚದುರಂಗದ ಕಾಯಿಗಳು, ಚೌಕಟ್ಟು, ಬೆಂಕಿಪೆಟ್ಟಿಗೆ, ಮುದ್ರಣ ಹಲಗೆ, ಗಣಿತೀಯ ಉಪಕರಣಗಳು, ರೂಲುದೊಣ್ಣೆ ಮುಂತಾದವುಗಳ ತಯಾರಿಕೆಗೆ ಒದಗುತ್ತದೆ.  ಬಿಳಿ ಇಲ್ಲವೆ ದಂತದ ಬಣ್ಣ, ನುಣುಪು, ಹೊಳಪು, ಸೂಕ್ಷ್ಮ ಹಾಗೂ ನಿಬಿಡ ಕಣರಚನೆ, ಲಘುತ್ವ ಮುಂತಾದ ಅಪೇಕ್ಷಣೀಯ ಗುಣಲಕ್ಷಣಗಳಿಂದ ಕೂಡಿದ ಬೆಪ್ಪಾಲೆಯ ಚೌಬೀನೆ ಹೆಚ್ಚು ಪ್ರಸಿದ್ಧವಾಗಿರುವುದು ಕರ್ನಾಟಕದ ಚನ್ನಪಟ್ಟಣದ ಆಟಿಕೆಗಳ ತಯಾರಿಕೆಗೆ, ಅಂತೆಯೇ ಹುದುಗು ಕೆತ್ತನೆ ಕೆಲಸಕ್ಕೂ (ಇನ್‍ಲೇ ವರ್ಕ್) ಅರಗುಶಿಲ್ಪ ಕಾರ್ಯಕ್ಕೂ ಈ ಚೌಬೀನೆ ಬಳಕೆಯಾಗುತ್ತದೆ. 

	ಬೆಪ್ಪಾಲೆಯ ತೊಗಟೆ, ಎಲೆ ಹಾಗೂ ಬೀಜಗಳಿಗೆ ಔಷಧೀಯ ಗುಣಗಳೂ ಉಂಟು. ತೊಗಟೆ, ಬೀಜಗಳನ್ನು ಅಜೀರ್ಣ, ಪಿತ್ಥವಿಕಾರಗಳ ಚಿಕಿತ್ಸೆಗೆ ತೊಗಟೆ, ಎಲೆಗಳ ಕಷಾಯವನ್ನು ಹೊಟ್ಟೆನೋವಿಗೆ ಮದ್ದಾಗಿ ಬಳಸಲಾಗುತ್ತದೆ.  ಹಲ್ಲು ನೋವಿನ ಪರಿಹಾರಕ್ಕೆ ಎಲೆಗಳನ್ನು ಅಗಿಯುವುದುಂಟು.  ಎಲೆ ಮತ್ತು ಬೇರುಗಳ ಸಾರ ರಕ್ತದೊತ್ತಡವನ್ನು ಇಳಿಸುತ್ತದೆನ್ನಲಾಗಿದೆ.  ಬೆಪ್ಪಾಲೆಯ ಹೂಗಳನ್ನು ತರಕಾರಿಯಾಗಿ ಬಳಸುವುದಿದೆ; ಹೂಗಳು ಕಹಿಯಾಗಿರುವುದರಿಂದ ಬಳಸುವ ಮೊದಲು ಚೆನ್ನಾಗಿ ತೊಳೆಯಲಾಗುತ್ತದೆ.  ಎಲೆಗಳನ್ನು ದನ ಮೇಕೆ ಕುರಿಗಳು ತಿನ್ನುವುವು.  ಸೊಪ್ಪು ಬತ್ತದ ಗದ್ದೆಗಳಿಗೆ ಗೊಬ್ಬರ.  ಎಲೆಗಳಿಂದ ಮೈಸೂರು ನೀಲಿ ಎಂಬ ರಂಗನ್ನು ಪಡೆಯಲಾಗುತ್ತದೆ.  
(ವಿ.ಎಸ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ